ಕಾರ್ನೇ, ಪ್ಯೇರ್

 1606-1682. ಪಾಶ್ಚಾತ್ಯ ರುದ್ರ (ಗಂಭೀರ) ನಾಟಕಕಾರರಲ್ಲಿ ಪ್ರಖ್ಯಾತನಾದ ಒಬ್ಬ ಫ್ರೆಂಚ್ ನಾಟಕಕಾರ. ಈತ ರೂವೆನ್ ನಗರದಲ್ಲಿ ಬ್ಯಾರಿಸ್ಟರ್ ಒಬ್ಬನ ಮಗನಾಗಿ ಹುಟ್ಟಿ ಜೆಸುಯಿಟ್ ಶಾಲೆಯಲ್ಲಿ ಶಿಕ್ಷಣ ಪಡೆದು ಲ್ಯಾಟಿನ್ ಭಾಷೆಯಲ್ಲಿ ಪದ್ಯರಚನೆಗಾಗಿ ಬಹುಮಾನಗಳನ್ನು ಗಳಿಸಿದ. ತಂದೆಯಂತೆಯೇ ನ್ಯಾಯಶಾಸ್ತ್ರ ಓದಿ ಇಪ್ಪತ್ತು ವರ್ಷ ವಕೀಲಿ ವೃತ್ತಿಯಲ್ಲಿದ್ದ; ಸರ್ಕಾರದ ಮುಖ್ಯ ವಕೀಲನಾಗಿಯೂ (ಅಟಾರ್ನಿ ಜನರಲ್) ಕೆಲಸಮಾಡಿದ. ಚರ್ಚ್ ವಾರ್ಡನ್ ಆಗಿ ಕೆಲಸಮಾಡಿ ತನ್ನ ಪ್ರದೇಶದ ಲೆಕ್ಕಪತ್ರವನ್ನು ನೋಡಿಕೊಳ್ಳುತ್ತಿದ್ದ. ಈತನ ವೃತ್ತಿ ವಕೀಲಿಯಾದರೂ ಒಲವೆಲ್ಲ ರಂಗಭೂಮಿಯ ಕಡೆಗೇ ಇತ್ತು.

 ತಾರುಣ್ಯದ ಪ್ರೇಮಪ್ರಕರಣವನ್ನು ಕುರಿತು ಮೆಲೈಟ್ (1630) ಎಂಬ ನಾಟಕವನ್ನು ಬರೆದ. ಫ್ರಾನ್ಸಿನ ದೊರೆ 13ನೆಯ ಲೂಯಿಯ ಆಸ್ಥಾನದ ವ್ಯಕ್ತಿಗಳನ್ನು ಕುರಿತು ಮಿಡೀ (1635) ಎಂಬ ನಾಟಕವನ್ನು ರಚಿಸಿದ. ಇದರಲ್ಲಿ ತಾರುಣ್ಯ, ಪ್ರೇಮಗಳ ಸಂಘರ್ಷಣೆಯಿದೆ. ಸ್ಪ್ಯಾನಿಷ್ ನಾಟಕಕಾರ ಕಾಸ್ಟ್ರೋವಿನ ನಾಟಕವನ್ನು ಆಧರಿಸಿ 1637ರಲ್ಲಿ ಲ ಸಿಡ್ ನಾಟಕವನ್ನು ಬರೆದ. ತ್ಯಾಗದಲ್ಲಿ ಕೊನೆಗೊಳ್ಳುವ ಪ್ರೇಮಿಗಳ ಕಥೆ ಇದು. ಸ್ಕುದೇರಿ ಎಂಬ ಬರೆಹಗಾರ ಈ ನಾಟಕದ ಬಗ್ಗೆ ದೊಡ್ಡ ವಿವಾದವನ್ನೆಬ್ಬಿಸಿ ಇದು ಸ್ಪ್ಯಾನಿಷ್ ನಾಟಕದ ಕೃತಿಚೌರ್ಯವೆಂದೂ ನಾಟಕಗಳಲ್ಲಿ ಪಾಲಿಸಬೇಕಾದ ಸ್ಥಳ, ಕಾಲ, ಘಟನೆಗಳ ಐಕ್ಯತೆಯನ್ನು ಬಂಗಗೊಳಿಸಿರುವ ಕೃತಿಯೆಂದೂ ಬೊಬ್ಬೆಯಿಟ್ಟ. ಕಡೆಗೆ ಫ್ರೆಂಚ್ ಸಾಹಿತ್ಯ ಪರಿಷತ್ತಿಗೆ ದೂರುಕೊಟ್ಟ. ಸ್ಕುದೇರಿಗೆ ಜಯವಾಯಿತು. ಆದರೂ ಕಾರ್ನೇ ಧೃತಿಗೆಡಲಿಲ್ಲ.

 1640-42ರ ಅವಧಿಯಲ್ಲಿ ರೋಮನ್ ಚಾರಿತ್ರಿಕ ವ್ಯಕ್ತಿಗಳನ್ನಾಧರಿಸಿ ಹೊರೇಸ್, ಸಿನ್ನ, ಪೊಲ್ಯೂಕ್ತ್ ಎಂಬ ನಾಟಕಗಳನ್ನು ರಚಿಸಿದ. ಹೊರೇಸ್ ನಾಟಕದಲ್ಲಿ ಪ್ರೇಮ, ದೇಶಪ್ರೇಮಗಳ ನಡುವಣ ತಿಕ್ಕಾಟವಿದೆ. ಹೊರೇಸ್ ಉತ್ಕøಷ್ಟ ದೇಶಪ್ರೇಮಿ. ಈತನ ತಂಗಿಯನ್ನು ಪ್ರೀತಿಸಿದ ಕ್ಯೂರಿಯಾಟಿ ಎಂಬಾತ ಹೊರೇಸನ ದೇಶಪ್ರೇಮವನ್ನು ಹಳಿದುದೇ ಕಾರಣವಾಗಿ ಇಬ್ಬರ ನಡುವೆ ಯುದ್ಧನಡೆದು ಅದರಲ್ಲಿ ಕ್ಯೂರಿಯಾಟಿ ಸಾಯುತ್ತಾನೆ. ಇಂಥ ವಿದ್ರೋಹಿಯ ಪ್ರೇಮಿಯೆಂದು ಹೊರೇಸನ ತಂಗಿಯೂ ಕೊಲ್ಲಲ್ಪಡುತ್ತಾಳೆ. ಸಿನ್ನ ನಾಟಕದಲ್ಲಿ ರಾಜಕೀಯದಲ್ಲಿ ನಡೆಯುವ ಉಚ್ಚ, ನೀಚ ಕಾರ್ಯಗಳ ಔಚಿತ್ಯದ ಪ್ರಶ್ನೆಯಿದೆ. ಆಗಸ್ಟಸ್ ಸೀಸರ್ ತನ್ನನ್ನು ಕೊಲ್ಲಲು ಬಂದ ಸಂಚುಕಾರರ ಮೇಲೆ ಸೇಡುತೀರಿಸಿಕೊಳ್ಳುವುದೋ ಅಥವಾ ಉದಾರಭಾವದಿಂದ ಅವರನ್ನು ಕ್ಷಮಿಸಿರುವುದೋ ಎಂದು ಅನಿಶ್ಚಿತತೆಯ ಮನಸ್ಸಿನ ತೂಗುಯ್ಯಾಲೆಯಲ್ಲಿ ತೊಳಲುತ್ತಾನೆ. ಪೊಲ್ಯೂಕ್ತ್ ನಾಟಕದಲ್ಲಿ ವ್ಯಕ್ತಿನಿಷ್ಠೆ ಹಾಗೂ ಧರ್ಮನಿಷ್ಠೆಗಳ ನಡುವಣ ಸಂಘರ್ಷಣೆ ಚಿತ್ರಿತವಾಗಿದೆ. ಪೊಲ್ಯೂಕ್ತ್ ಕ್ರೈಸ್ತ. ಆತನ ಹೆಂಡತಿ ಕ್ರೈಸ್ತಳಲ್ಲ. ತನ್ನ ಧರ್ಮನಿಷ್ಠೆಯ ಹಾದಿಯಲ್ಲಿ ಬಂದ ಇತರರನ್ನೂ ಆಕೆ ಗೆಲ್ಲುತ್ತಾಳೆ. 1643ರಲ್ಲಿ ಪ್ರಕಟವಾದ ಪಾಂಪೆಯ ಮರಣ ಎಂಬ ನಾಟಕದಲ್ಲಿ ರೋಮನ್ ದೊರೆ ಪಾಂಪೆಯ ಧೃತಿಯನ್ನು ಕವಿ ಉತ್ಕಟವಾಗಿ ಚಿತ್ರಿಸಿದ್ದಾನೆ. ಲೆಮಂತೂರ್ ಎಂಬುದು 1644ರಲ್ಲಿ ಬರೆದ ಹರ್ಷನಾಟಕ. ಪ್ರೇಮಸಾಹಸಗಳ ಪ್ರವೃತ್ತಿಯುಳ್ಳ ದೊರಾಂತೆ ಮಹಾ ಸುಳ್ಳುಗಾರ. ಆತನ ಸುಳ್ಳಿನ ಸರಪಣಿಯನ್ನು ಹಗುರವಾಗಿ ಉಲ್ಲಾಸಪೂರಿತವಾಗಿ ಉಚಿತಶೈಲಿಯಲ್ಲಿ ಕವಿ ಚಿತ್ರಿಸಿದ್ದಾನೆ.

 1645ರಲ್ಲಿ ಪ್ರಕಟವಾದ ರೋದೋಗುನೆ ಎಂಬುದು ಕ್ಲಿಯೋಪಾತ್ರಳನ್ನು ಕುರಿತ ನಾಟಕ. ರೋದೋಗುನೆ ಕ್ಲಿಯೋಪಾತ್ರಳ ಪ್ರತಿಸ್ಪರ್ಧಿ. ಕ್ಲಿಯೋಪಾತ್ರಳ ಮಗ ಆಕೆಯನ್ನು ಪ್ರೇಮಿಸುತ್ತಾನೆ. ತ್ಯಾಗದಲ್ಲಿ ಅದು ಕೊನೆಯಾಗುತ್ತದೆ.

 ನಿಕೋಮೈಡ್ (1650) ವ್ಯಂಗ್ಯೋಕ್ತಿಯ ನಾಟಕ. ಆಂದ್ರೋಮೆಡ ಸಂಗೀತಕ್ಕೆ ಅಳವಡಿಸಿದ, ಆಡಂಬರದ ದೃಶ್ಯಗಳುಳ್ಳ ನಾಟಕ. ಈದಿಪೆ (1659) ಮಹಾಕಾವ್ಯದ ವೀರನನ್ನು ಅಪಾರ್ಥಮಾಡಿಕೊಂಡು ಬರೆದ ಕೃತಿ. ಓಥನ್, ಪುಲ್ಟೇರಿ, ಸೆರ್‍ತೋರಿಯಸ್-ಈ ಮೂರೂ ಶಬ್ದಾಡಂಬರದ ನಾಟಕಗಳು.

 ಈ ಕವಿಯ ನಾಟಕದ ಪಾತ್ರಗಳು ನಿಜಜೀವನದ ಪ್ರತಿಬಿಂಬವಾಗಿವೆ. ಅಪೂರ್ವವಾದುದನ್ನೇ ಈತ ಅರಸುತ್ತಿದ್ದ. ಪರಿಸರದ ಅವಗಡಗಳನ್ನು ಮನೋದಾಢ್ರ್ಯದಿಂದ ಗೆಲ್ಲಬಹುದೆಂಬ ತತ್ತ್ವಕ್ಕೆ ಇವನಲ್ಲಿ ಅನೇಕ ನಿದರ್ಶನಗಳು ಸಿಗುತ್ತವೆ.

 ಈತನ ನಾಟಕಗಳಲ್ಲಿ ಧೀರೋದಾತ್ತತೆಯ ಪರಿಸರಣವಿದೆ. ಕರ್ತವ್ಯದ ನಾನಾ ರೂಪಗಳಲ್ಲಿ ಆತ್ಮಸಂಯಮ ಎಲ್ಲ ಗುಣಗಳ ಸಾರವೆಂಬುದಿಲ್ಲಿ ಪ್ರಕಟಗೊಂಡಿದೆ. ಗೌರವ, ನಿಷ್ಠೆ, ನಂಬಿಕೆಯಂಥ ಉತ್ತಮ ಆದರ್ಶಗಳು, ಪಾತಿವ್ರತ್ಯದ ಹಿರಿಮೆ, ಸ್ವಹಿತಕ್ಕಲ್ಲದೆ ದೇಶಹಿತಕ್ಕಾಗಿ ನಡೆಸುವ ಹೋರಾಟ-ಈ ಮುಂತಾದವು ಇವನ ನಾಟಕಗಳಲ್ಲಿ ಕಂಡುಬರುವ ಆದರ್ಶಗಳು.

 ಕಾರ್ನೇಯ ಹರ್ಷನಾಟಕಗಳಲ್ಲಿ ವಿಮರ್ಶಾತ್ಮಕ ಪ್ರವೃತ್ತಿಗಿಂತ ಸಂತೋಷಕ್ಕೇ ಪ್ರಾಧಾನ್ಯ. ಮಾನವ ಪ್ರವೃತ್ತಿಯ ಸಹಜ ದೌರ್ಬಲ್ಯಗಳು, ವೈಪರೀತ್ಯಗಳನ್ನು ಇಲ್ಲಿ ಕಾಣಬಹುದು. ಗಂಭೀರಪ್ರವೃತ್ತಿಯ ಹರ್ಷನಾಟಕ (ಟ್ರಾಜಿಕ್ ಕಾಮೆಡಿ) ಈತನ ಮಾಧ್ಯಮವಾಗಲು ಈತನ ಸಾಹಸಪ್ರವೃತ್ತಿಯೇ ಕಾರಣ. ಸಾಮಾಜಿಕ ತರ್ಕವೇ ಈತನ ಆರಾಧ್ಯದೇವತೆ. ಯೂರೋಪಿನ ನವೋದಯಕ್ಕೆ ಇದೇ ಫ್ರೆಂಚರ ಕಾಣಿಕೆ. ಹೊರೇಸ್, ಸಿನ್ನ, ಪೊಲ್ಯೂಕ್ತ್ ಒಂದೊಂದೂ ಕಾಲಾತೀತವಾದ ವಿಶ್ವವ್ಯಾಪಿಯಾದ ದೇಶಪ್ರೇಮ, ಉನ್ನತ ಆದರ್ಶ, ತ್ಯಾಗಮಯ ಜೀವನಗಳ ಪ್ರತೀಕಗಳು.

 ಜಿತೇಂದ್ರಿಯತ್ವವೇ ಕಾರ್ನೇ ಬೋಧಿಸುವ ತತ್ತ್ವ. ಮನೋನಿಶ್ಚಯದಿಂದ ವಿಧಿಯನ್ನು ಗೆಲ್ಲಲು ಮಾನವ ಸ್ವತಂತ್ರ. ಅವನು ಸೃಜಿಸಿದ ಕೆಲವು ವ್ಯಕ್ತಿಗಳು ಜಿತೇಂದ್ರಿಯರಾಗಿ ನಿರ್ಲಿಪ್ತಭಾವದಿಂದಿದ್ದು, ಸಾವನ್ನು ಸಹ ನಗುಮುಖದಿಂದ ಸ್ವಾಗತಿಸುತ್ತಾರೆ.

 ಫ್ರೆಂಚ್ ಜನಾಂಗದ ನೈತಿಕ ಸ್ವರೂಪದ ನಿತ್ಯತತ್ತ್ವಗಳನ್ನು ಕಾರ್ನೇ ತನ್ನ ಕೃತಿಗಳಲ್ಲಿ ವ್ಯಕ್ತಪಡಿಸಿದ್ದಾನೆ. ರಾಷ್ಟ್ರೀಯ ದುರಂತದ ಸಂದರ್ಭಗಳಲ್ಲಿ ಫ್ರೆಂಚರು ಸ್ಫೂರ್ತಿಗಾಗಿ ಈತನನ್ನು ಓದುತ್ತಾರೆ.     

 (ಟಿ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ